News

ಅಯ್ಯಪ್ಪ ಭಕ್ತಿಗೀತೆಗೆ ಹೊಸ ಸಾಹಿತ್ಯ – ಬಾವಾ ವಿರುದ್ಧ ಡಿಸಿಗೆ ದೂರು – ಉಗ್ರ ಪ್ರತಿಭಟನೆಯ ಎಚ್ಚರಿಕೆ

ಮಂಗಳೂರು, ಮಾ 10: ಮುಂಬರುವ ಚುನಾವಣೆಗೆ ಪ್ರಚಾರ ಮಾಡುವ ಭರದಲ್ಲಿ ಮಂಗಳೂರು ಉತ್ತರ ಶಾಸಕ ಮೊಯ್ದೀನ್ ಬಾವಾ ಎಡವಟ್ಟು ಮಾಡಿಕೊಂಡಿದ್ದಾರೆ.


ಇದೀಗ ಬಾವಾ ಅವರ ಹಾಡಿಗೆ ತೀವ್ರ ವಿರೋಧ ವ್ಯಕ್ತವಾಗ್ತಾ ಇದ್ದು, ಗೀತೆಯನ್ನು ತೆಗೆಯುವಂತೆ ಆಗ್ರಹಿಸಿ ಅಯ್ಯಪ್ಪ ಸೇವಾ ಟ್ರಸ್ಟ್ ಜೋಡುಕಟ್ಟೆ ಮರೋಳಿ ವತಿಯಿಂದ ಮಂಗಳೂರು ತಹಶೀಲ್ದಾರ್ ಮುಖಾಂತರ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಚುನಾವಣಾ ಪ್ರಚಾರಕ್ಕೆ ಅಯ್ಯಪ್ಪ ಸ್ವಾಮಿಯ ಹಾಡಿಗೆ ಹೊಸ ಸಾಹಿತ್ಯ ಬಳಸಿದ ಹಿನ್ನಲೆ ಹಿಂದೂ ಭಾವನೆಗೆ ಧಕ್ಕೆ ತರಲಾಗಿದೆ. ಹೀಗಾಗಿ ಮೊಯ್ದೀನ್ ಬಾವಾ ವಿರುದ್ಧ ಕ್ರಮ ಜರುಗಿಸುವಂತೆ ಕೂಡಾ ಒತ್ತಾಯಿಸಿದ್ದಾರೆ. ಕ್ರಮ ಜರುಗಿಸದೇ ಇದ್ದಲ್ಲಿ ಉಗ್ರ ಪ್ರತಿಭಟನೆಯ ಎಚ್ಚರಿಕೆಯನ್ನು ಹಿಂದೂ ಸಂಘಟನೆಗಳು ನೀಡಿವೆ.

ಬಾವಾ ತಾವು ತಮ್ಮ ಅಧಿಕಾರದ ಅವಧಿಯಲ್ಲಿ ಮಾಡಿದ ಸಾಧನೆಯನ್ನು ಹಾಡಿನ ಮೂಲಕ ಹೊರಹಾಕಿದ್ದಾರೆ. ಆದರೆ ತಮ್ಮನ್ನು ಹೊಗಳುವ ಹಾಡು ರಚಿಸುವ ಭರದಲ್ಲಿ ಹಿಂದೂಗಳ ಪವಿತ್ರ ಆರಾಧ್ಯ ದೇವರಾದ ಅಯ್ಯಪ್ಪ ಸ್ವಾಮಿಯ ಗೀತೆಯನ್ನು ವಿರೂಪ ಮಾಡಿದ್ದಾರೆ ಎನ್ನುವ ಗಂಭೀರ ಆರೋಪ ಕೇಳಿ ಬಂದಿದೆ.

ಪ್ರಸಿದ್ಧ ದೇವರ ಗೀತೆಯೊಂದನ್ನು ತಮ್ಮ ಕೀಳು ರಾಜಕೀಯ ಪ್ರಚಾರಕ್ಕೆ ಬಳಸಿಕೊಂಡಿರುವುದು ಹಿಂದೂ ಇರುವ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ. ಕಲ್ಲು ಮುಳ್ಳು ಪಾದಕ್ಕೆ ಹೂವು ಅನ್ನೋ ಅಯ್ಯಪ್ಲ ಸ್ವಾಮಿಯ ಪ್ರಸಿದ್ಧ ಗೀತೆಯೊಂದರ ಸಂಗೀತವನ್ನು ನಕಲಿ ಮಾಡಿ ಕಲ್ಲು ಮುಳ್ಳು ತೋಜುನೆ ಇಜ್ಜಿ ಅನ್ನೋ ತುಳು ಸಾಹಿತ್ಯದ ಮೂಲಕ ಗೀತೆ ರಚಿಸಿ ವೈರಲ್ ಮಾಡಿದ್ದಾರೆ. ಈಗಾಗಲೇ ಹಲವು ತುಳು ಪ್ರಚಾರ ಗೀತೆಗಳನ್ನು ರಚಿಸಿರುವ ಬಾವಾ, ತಮ್ಮ ಕ್ಷೇತ್ರದಲ್ಲಿ ಈ ಮೂಲಕ ಪ್ರಚಾರ ನಡೆಸಿದ್ದು, ಈ ಗೀತೆಗಳು ವೈರಲ್ ಆಗಿದೆ.

ಇದರಿಂದ ಆಕ್ರೋಶಗೊಂಡಿರುವ ಅಯ್ಯಪ್ಪ ಸೇವಾ ಟ್ರಸ್ಟ್ ಮತ್ತು ಹಿಂದೂಗಳು ದೇವರಿಗೆ ಅವಹೇಳನ ಮಾಡಲಾಗಿದೆ ಎನ್ನುವ ಆರೋಪ ಮಾಡಿದ್ದಾರೆ. ಇದೀಗ ಬಾವಾ ಮಾಡಿಕೊಂಡಿರುವ ಎಡವಟ್ಟು ವಿವಾದಕ್ಕೆ ಕಾರಣವಾಗಿದೆ.