News

ಸನಾತನ ಹಿಂದೂ ಧರ್ಮದ ಆಚಾರ, ವಿಚಾರಗಳನ್ನು ಪಾಲಿಸುತ್ತೇನೆ – ಜನರ ಆಶೀರ್ವಾದವೇ ನನಗೆ ರಕ್ಷಣೆ: ರೈ

ಮಂಗಳೂರು, ಫೆ 9: ಮನುಷ್ಯ ವಿರೋಧಿ ನಾನಲ್ಲ. ಬದಲಾಗಿ ಅವರನ್ನು ನಾನು ಪ್ರೀತಿಸುತ್ತೇನೆ. ಹೀಗಾಗಿ ಅವರ ಆಶೀರ್ವಾದವೇ ನನಗೆ ರಕ್ಷಣೆ ಎಂದು ಸಚಿವ ರಮಾನಾಥ ರೈ ಹೇಳಿದ್ದಾರೆ.

ಯಾರೂ ಕೂಡ ನನ್ನನ್ನು ಜಾತಿವಾದಿ ಮತ್ತು ಮತೀಯವಾದಿ ಎಂದು ಹೇಳಿಲ್ಲ. ಆಸ್ತಿಕವಾಗಿ ಒಬ್ಬ ಮನಷ್ಯ ಹೇಗಿರಬೇಕೋ ಹಾಗೆಯೇ ನಾನಿದ್ದೇನೆ. ನಾನು ಎಲ್ಲಾ ಜಾತಿ, ಧರ್ಮದ ಜನರನ್ನು ಪ್ರೀತಿಸುತ್ತೇನೆ. ಎಲ್ಲರೊಂದಿಗೂ ಬೆರೆಯುತ್ತೇನೆ. ನಾನು ಜನರ ಪ್ರೀತಿಯ ಮೂಲಕ ದೇವರನ್ನು ಕಾಣುತ್ತೇನೆ. ಜನರ ಆಶೀರ್ವಾದವೇ ನನಗೆ ರಕ್ಷಣೆ ಎಂದು ತಿಳಿಸಿದ್ದಾರೆ.

ಗೌರಿ ಹತ್ಯೆಯ ಶಂಕಿತರು ತನ್ನ ಮೇಲೆ ಹತ್ಯೆಗೆ ಸಂಚು ರೂಪಿಸಿದ್ದರು ಎಂಬ ಮಾಹಿತಿಗೆ ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ನನಗೆ ನಿಖರ ಮಾಹಿತಿಯಿಲ್ಲ. ನಾವು ಜನರನ್ನು ಪ್ರೀತಿಸುವವರು. ಎಲ್ಲರ ಜೊತೆ ಬೆರೆಯುವವರು. ಸನಾತನ ಹಿಂದೂ ಧರ್ಮದ ವಿಚಾರಗಳನ್ನು ಬಹಳ ಆಳವಾಗಿ ತಿಳಿದುಕೊಂಡವರು. ಸನಾತನ ಹಿಂದೂ ಧರ್ಮದ ಎಲ್ಲಾ ಆಚಾರ-ವಿಚಾರಗಳನ್ನು ಪಾಲಿಸುತ್ತೇನೆ. ನಾಗಮಂಡಲದಂತಹ ಕಾರ್ಯಕ್ರಮ, ದೇವಸ್ಥಾನದ ಜೀರ್ಣೋದ್ಧಾರ, ಜೊತೆಗೆ ಎಲ್ಲಾ ಧರ್ಮ ಕೇಂದ್ರಗಳ ಅಭಿವೃದ್ಧಿಗಳಲ್ಲಿ ನನ್ನ ಪಾತ್ರವಿದೆ. ಕಷ್ಟದಲ್ಲಿ ಬಂದ ಎಲ್ಲರ ಸೇವೆಯನ್ನೂ ಮಾಡುತ್ತೇನೆ. ನನ್ನ ರಕ್ಷಣೆಗೆ ದೇವರು ಇರುತ್ತಾನೆ ಎಂದು ತಿಳಿಸಿದ್ದಾರೆ.