News

ಓಲಾ ಕ್ಯಾಬ್ ಡ್ರೈವರ್ ಸೇನಾಧಿಕಾರಿಯಾದ..!

 

ಮಾ 08: ಇದು ಓಲಾ ಕ್ಯಾಬ್ ಚಾಲಕ, ಸೇನಾಧಿಕಾರಿಯಾದ ಯಶೋಗಾಥೆ. ಪುಣೆ ಸಮೀಪ ತೊಂಡಾಲ್ ಗ್ರಾಮದ ಓಂ ಪೈಠಣೆ ಎನ್ನುವ ಚಿಗುರು ಮೀಸೆಯ ಯುವಕ ಮಾಜಿ ಓಲಾ ಕ್ಯಾಬ್ ನ ಚಾಲಕ, ಆಗ ಹೊರಟಿರುವುದು ಭಾರತೀಯ ಸೇನೆಯಲ್ಲಿ ಅಧಿಕಾರಿ. ಇದೇ ಮಾರ್ಚ್‌ 10ರಂದು ಚೆನ್ನೈನಲ್ಲಿನ ಸೇನಾಧಿಕಾರಿಗಳ ತರಬೇತಿ ಕೇಂದ್ರದಲ್ಲಿ ತನ್ನ ತರಬೇತಿಯನ್ನು ಮುಗಿಸಲಿರುವ ಈತ ಬಳಿಕ ಭಾರತೀಯ ಸೇನೆಯನ್ನು ಅಧಿಕೃತವಾಗಿ ಸೇರಲಿದ್ದಾರೆ.


ಇನ್ನು ಓಂ ಪೈಠಣೆ ಅವರ ತಂದೆ ಮಗನ ಸಾಧನೆ ಕಂಡು ಹೆಮ್ಮೆ ಪಟ್ಟಿದ್ದು, ಇವರು ತಮ್ಮ 25 ಕಾಲ ವರ್ಷ ಡ್ರೈವರ್‌ ಆಗಿಯೇ ದುಡಿದವರು. ಆದರೆ ಇವರಿಗೆ ತಮ್ಮ ಮಕ್ಕಳು ಚಾಲಕ ವೃತ್ತಿಗೆ ಸೇರುವುದು ಸುತರಾಂ ಇಷ್ಟವಿರಲಿಲ್ಲ. ಅತ್ತ ತನ್ನ ಕಲಿಕೆ ಮನೆಯವರಿಗೆ ಹೊಣೆಯಾಗಬಾರದೆಂದು ಓಂ ಪೈಠಣೆ ತಂದೆಗೆ ಕದ್ದು ಮುಚ್ಚಿ ಒಲಾ ಕ್ಯಾಬ್ ನಲ್ಲಿ ಡ್ರೈವಿಂಗ್‌ ವೃತ್ತಿ ಮಾಡುತ್ತಾ ಜೀವನ ನಿರ್ವಹಣೆ ಮಾಡುತ್ತಾ ಮನೆಗೆ ಆರ್ಥಿಕವಾಗಿಯೂ ನೆರವಾಗುತ್ತಿದ್ದರು. ಆದರೆ ಬಾಲ್ಯದಿಂದಲೂ ಭಾರತೀಯ ಸೇನೆ ಸೇರಬೇಕೆಂಬ ಕನಸನ್ನು ನನಸು ಮಾಡುವ ಛಲ ಅವರಲ್ಲಿ ಇದ್ದೇ ಇತ್ತು. ಇದೀಗ ತನ್ನ ತರಭೇತಿಯನ್ನು ಪೂರ್ಣಗೊಳಿಸಿ ಸೇನೆ ಸೇರಲು ಅಣಿಯಾಗಿರುವ ಅವರು ತಮ್ಮ ಚಾಲಕ ವೃತ್ತಿಯ ಬಗ್ಗೆಯಾಗಲಿ , ಸೇನಾ ತರಬೇತಿಯ ಬಗ್ಗೆಯಾಗಲಿ ಯಾವುದನ್ನು ತಮ್ಮ ಕುಟುಂಬದವರಲ್ಲಿ ಹಂಚಿಕೊಂಡಿರಲಿಲ್ಲ. ಓಂ ಪೈಠಣೆ ಸೇನೆಯನ್ನು ಸೇರಿಕೊಂಡ ಸುದ್ದಿ ಆತನ ಮನೆ ಮಂದಿಗೆ ತಿಳಿದಿದ್ದು, ಸ್ಥಳೀಯ ಮಾಧ್ಯಮಗಳಲ್ಲಿ ಪ್ರಕಟವಾದ ಸಂದರ್ಶನದಿಂದ.

ಇದೀಗ ಆತನ ಸಾಧನೆ ಕಂಡು ತಂದೆ ಉತ್ತಮ್‌, ತಾಯಿ ಸುಶೀಲಾ ಮತ್ತು ಸಹೋದರಿ ಮೋನಿಕಾ ಸಂತಸ ವ್ಯಕ್ತಪಡಿಸಿದ್ದಾರೆ.