News

ಕಾರ್ಕಳ: ಯುವ ಸಮುದಾಯವನ್ನು ಬಡಿದೆಬ್ಬಿಸುವ ಅಭ್ಯರ್ಥಿ ಕಾಂಗ್ರೆಸ್ ಪಕ್ಷದಲ್ಲಿರಬೇಕು - ನೇಮಿರಾಜ್ ರೈ

ಕಾರ್ಕಳ, ಫೆ 12: ಪ್ರಸಕ್ತ ರಾಜಕೀಯ ಸ್ಥಿತಿಗತಿಯಲ್ಲಿ ಯುವ ಸಮುದಾಯವನ್ನು ಬಡಿದೆಬ್ಬಿಸುವ ಅಭ್ಯರ್ಥಿಯ ಅಗತ್ಯ ಇದೆ ಎಂದು ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ನಿಟ್ಟೆ ನೇಮಿರಾಜ್ ರೈ ಹೇಳಿದ್ದಾರೆ.

ಮಿಯ್ಯಾರು ಮಧುವನದಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದ ಅವರು, ಕಳೆದ ಎಂಟು ವರ್ಷಗಳಿಂದ ಕಾರ್ಕಳದಲ್ಲಿ ಕಾಂಗ್ರೆಸ್ ಚಟುವಟಿಗಳು ನಿಷ್ಕ್ರಿಯಗೊಂಡಿರಲು ಉತ್ತರ, ದಕ್ಷಿಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳೇ ಹೊಣೆಗಾರರಾಗಿದ್ದಾರೆ. ಯುವ ಸಮುದಾಯವನ್ನು ಸೆಳೆದುಕೊಳ್ಳುವಂತ ಒಂದೇ ಒಂದು ಕಾರ್ಯಕ್ರಮಗಳನ್ನು ಆಯೋಜಿಸಿಲ್ಲ ಎಂದು ಹೇಳಿದರು.

ಕಳೆದ ವಿಧಾನ ಸಭಾ, ಲೋಕಸಭಾ, ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್, ಗ್ರಾಮ ಪಂಚಾಯತ್ ಚುನಾವಣೆಗಳಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋಲು ಕಂಡ ಸಂದರ್ಭದಲ್ಲಿ ಈ ವಿಚಾರವನ್ನು ಮುಖಂಡರಾದ ಆಸ್ಕರ್ ಫೆರ್ನಾಂಡಿಸ್, ವೀರಪ್ಪ ಮೊಯಿಲಿಯವರ ಗಮನಕ್ಕೂ ತಂದಿದ್ದೇನೆ ಎಂದು ಇದೇ ವೇಳೆ ಬಹಿರಂಗಪಡಿಸಿದರು.

ಕಾರ್ಕಳ ಕಾಂಗ್ರೆಸ್ ಕಟ್ಟಿ ಬೆಳೆಸುವಲ್ಲಿ ವೀರಪ್ಪ ಮೊಯಿಲಿ, ಗೋಪಾಲ ಭಂಡಾರಿಯವರ ಕಾರ್ಯ ಸಾಧನೆ ಅಪಾರವಾಗಿತ್ತು. ಅವರಿಬ್ಬರು ಸಜ್ಜನ ರಾಜಕರಣಿಗಳು. ಈಗೀನ ರಾಜಕೀಯ ಸ್ಥಿತಿ ಗತಿಯಲ್ಲಿ ಬದಲಾವಣೆ ಅಗತ್ಯವಾಗಿದೆ. ಅವರಿಬ್ಬರ ನೇತೃತ್ವದಲ್ಲಿ ಮುನಿಯಾಲು ಉದಯಕುಮಾರ್ ಶೆಟ್ಟಿ ಮುಂಬರುವ ಕಾಂಗ್ರೆಸ್ ಅಭ್ಯರ್ಥಿಯಾಗಬೇಕೆಂಬುವುದು ನಮ್ಮೆಲ್ಲರ ಬೇಡಿಕೆಯೂ ಆಗಿದೆ ಎಂದರು.

ಮುನಿಯಾಲು ಉದಯ ಕುಮಾರ್ ಶೆಟ್ಟಿ ಕಾಂಗ್ರೆಸ್‌ನ ಅಭ್ಯರ್ಥಿಯಾದಲ್ಲಿ ಮಾತ್ರ ಸುನೀಲ್‌ ಕುಮಾರ್‌ಗೆ ಅಕುಂಶ ಹಾಕಲು ಸಾಧ್ಯವಿದೆ. ಹೀಗಾದರೆ ಸುನೀಲ್‌ಕುಮಾರ್ ಇತರ ಕ್ಷೇತ್ರ್ಕಕೂ ಕಾಲಿಡಲು ಭಯಪಡಬಹುದು. ಇತರ ಕ್ಷೇತ್ರಗಳಲ್ಲೂ ಕಾಂಗ್ರೆಸ್‌ಗೂ ಅಡಚಣೆಯಾಗಲಾರದು. ಮುನಿಯಾಲು ಉದಯಕುಮಾರ್ ಶೆಟ್ಟಿ ಕಾಂಗ್ರೆಸ್ ಅಭ್ಯರ್ಥಿಯಾಗಲೇ ಬಾರದೆಂಬ ಕಾರಣಕ್ಕಾಗಿ ಸುನೀಲ್‌ ಕುಮಾರ್ ಶತಗತಾಯ ಪ್ರಯತ್ನ ನಡೆಸುತ್ತಿದ್ದಾರೆ. ಇತ್ತೀಚಿನ ಪ್ರವಾಸಿ ಬಂಗಲೆ ರಾಜಕೀಯ ಇದಕ್ಕೆ ಉತ್ತಮ ನಿದರ್ಶನ ಎಂದರು.

ಪ್ರತಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲ್ಲಲೇ ಬೇಕು. ಅದಕ್ಕಾಗಿ ಸರ್ವ ಸಿದ್ಧತೆ ನಡೆಸಬೇಕೆಂಬ ರಾಷ್ಟ್ರೀಯ ಅಧ್ಯಕ್ಷ ರಾಹುಲ್‌ಗಾಂಧಿ ಅವರ ಕನಸು ನನಸು ಮಾಡುವ ನಿಟ್ಟಿನಲ್ಲಿ ಮುನಿಯಾಲು ಉದಯ ಕುಮಾರ್ ಶೆಟ್ಟಿ ಅವರನ್ನೇ ಕಾಂಗ್ರೆಸ್ ಅಭ್ಯರ್ಥಿಯನ್ನಾಗಿ ಮಾಡಬೇಕು. ಆ ಮೂಲಕ ಮುಂಬರುವ ವಿಧಾನ ಸಭಾ ಚುವಾವಣೆಯಲ್ಲಿ ಕಾಂಗ್ರೆಸ್ ಪಕ್ಷ 25 ಸಾವಿರ ಮತಗಳ ಅಂತರದಲ್ಲಿ ಗೆಲುವು ಸಾಧಿಸಲು ಹಗಲಿರುಳು ದುಡಿಯಲು ಸಿದ್ಧವಾಗಿದ್ದೇವೆ ಎಂದು ಇದೇ ಸಂದರ್ಭದಲ್ಲಿ ನೇಮಿರಾಜ್ ರೈ ತಿಳಿಸಿದರು.

ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಸುಪ್ರೀತ್ ಶೆಟ್ಟಿ, ರೆಂಜಾಳ ಗ್ರಾಮ ಪಂಚಾಯತ್ ಅಧ್ಯಕ್ಷ ವಾಸು ಶೆಟ್ಟಿ, ಯುವ ಕಾಂಗ್ರೆಸ್ ಅಧ್ಯಕ್ಷ ದೀಪಕ್  ಕೋಟ್ಯಾನ್, ಉಪಾಧ್ಯಕ್ಷ ರಂಜಿತ್ ಸಿ.ಟಿ, ಎಪಿಎಂಸಿ ಸದಸ್ಯ ಜಯರಾಮ್ ಆಚಾರ್ಯ, ಜಿಲ್ಲಾ ಅಲ್ಪಸಂಖ್ಯಾತ ವಿಭಾಗದ ಸಂಚಾಲಕ ಶೇಕ್ ಶಬ್ಬೀರ್, ಕುಕ್ಕುಂದೂರು ಗ್ರಾಮ ಪಂಚಾಯತ್ ಸದಸ್ಯ ರುಕ್ಮಯ್ಯ ಶೆಟ್ಟಿಗಾರ್,  ಮಿಯ್ಯಾರು ಐಟಿ ವಿಭಾಗದ ಅಧ್ಯಕ್ಷ ಡೇನಿಯಲ್ ರೇಂಜರ್, ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ತಾರಾನಾಥ ಕೋಟ್ಯಾನ್ ಮೊದಲಾದವರು ಉಪಸ್ಥಿತರಿದ್ದರು.