News

ರಾಜ್ಯ ಸರಕಾರದ ಧೋರಣೆಯಿಂದ ಸಮಾಜದಲ್ಲಿ ಅಶಾಂತಿ ತಾಂಡವವಾಡುತ್ತಿದೆ- ಶಾಸಕ ಸುನೀಲ್ ಕುಮಾರ್

ಕಾರ್ಕಳ, ಫೆ 11: ಸೇವಾ, ಸುರಕ್ಷಾ, ಸಂಸ್ಕಾರಗಳು ವಿಶ್ವ ಹಿಂದು ಪರಿಷದ್‌ನ ಧ್ಯೇಯವಾಕ್ಯವಾಗಿದೆ. ಮತಾಂತರ, ಭಯೋತ್ಪಾದನೆ, ಲವ್ ಜಿಹಾದ್, ಗೋಹತ್ಯೆ ವಿರುದ್ಧ ಮಾತ್ರ ಹೋರಾಟ ನಡೆಸದೇ ಸಮಾಜ ಸೇವಾ ಹಲವು ಸತ್ಕಾರ್ಯಗಳನ್ನು ನಡೆಸುತ್ತಾ ಬಂದಿದೆ ಎಂದು ಶಾಸಕ ಹಾಗೂ ವಿಧಾನಸಭಾ ಪ್ರತಿಪಕ್ಷ ಮುಖ್ಯ ಸಚೇತಕ ವಿ.ಸುನೀಲ್‌ಕುಮಾರ್ ಹೇಳಿದರು. 

ಹೊಸ್ಮಾರು ವಲಯ ವಿಶ್ವ ಹಿಂದು ಪರಿಷದ್, ಬಜರಂಗದಳ ಹಾಗೂ ಅತ್ತಾವರ ಕೆಎಂಸಿ ಆಸ್ಪತ್ರೆಯ ಸಹಯೋಗದಲ್ಲಿ 1000 ಕುಟುಂಬಗಳಿಗೆ 2 ಕೋಟಿ 50 ಕೋಟಿ ಮೊತ್ತದ ಉಚಿತ ಆರೋಗ್ಯ ಕಾರ್ಡ್ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವ್ಯಕ್ತಿಯೊಬ್ಬನ ಆರೋಗ್ಯ ಹದಗೆಟ್ಟರೆ ಇಡೀ ಕುಟುಂಬ ಸದಸ್ಯರು ನೆಮ್ಮದಿ ಬದುಕು ನಿರ್ವಹಿಸಲು ಸಾಧ್ಯವಿಲ್ಲ. ಬಡವರ್ಗದ ಮನೆಯವರ ಕಣ್ಣೋರೆಸುವ ಕಾರ್ಯವನ್ನು ಸಂಘಟನೆ ನಡೆಸಿದೆ. ಆ ನಿಟ್ಟಿನಲ್ಲಿ ಹೆಲ್ತ್ ಕಾರ್ಡ್ ವಿತರಿಸುವ ಮೂಲಕ ಇತರ ಸಂಘಟನೆಗಳಿಗೆ ಮಾದರಿಯಾಗಿದೆ ಎಂದರು.
 

 

ಸರಕಾರದ ಧೋರಣೆಯಿಂದ ಸಮಾಜದಲ್ಲಿ ಅಶಾಂತಿ!
ರಾಜ್ಯ ಸರಕಾರದ ಧೋರಣೆಯಿಂದ ಸಮಾಜದಲ್ಲಿ ಅಶಾಂತಿ ಹೆಚ್ಚುತ್ತಿದೆ. ದೇಶ ಭಕ್ತ, ಸಮಾಜ ಸೇವೆಗೈಯುತ್ತಿರುವ ವಿಶ್ವಹಿಂದು ಪರಿಷದ್ ಹಾಗೂ ಬಜರಂಗ ದಳವನ್ನು ಭಯೋತ್ಪಾದಕ ಸಂಘಟನೆಯ ಎಂಬಂತೆ ಮುಖ್ಯಮಂತ್ರಿ ಬಿಂಬಿಸುತ್ತಾ ಬಂದಿದ್ದಾರೆ. ಸರಣಿ ಕೊಲೆಗಳು, ಭಯೋತ್ಪಾದನೆ, ದೇಶದ್ರೋಹಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಸಂಘಟನೆಗಳು ಸರಕಾರಕ್ಕೆ ಮತ್ತು ಮುಖ್ಯಮಂತ್ರಿಗೆ ತೀರಾ ಹತ್ತಿರವಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ. ಮಾತ್ರವಲ್ಲದೇ ವಿಶ್ವ ಹಿಂದೂ ಪರಿಷದ್ ಹಾಗೂ ಬಜರಂಗ ದಳಕ್ಕೆ ಪ್ರತಿಯೊಂದು ಮನೆಯ ಸದಸ್ಯರು ಸೇರ್ಪಡೆಗೊಳ್ಳಬೇಕಾಗಿದೆ ಎಂದು ಇದೇ ಸಂದರ್ಭದಲ್ಲಿ ಶಾಸಕ ಸುನೀಲ್‌ಕುಮಾರ್ ಕರೆ ನೀಡಿದರು.

ನಾರಾವಿ ಶ್ರೀ ಸೂರ್ಯ ನಾರಾಯಣ ದೇವಸ್ಥಾನದ ಅರ್ಚಕ ಕೃಷ್ಣ ತಂತ್ರಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಹಿಂದುತ್ವದ ಪ್ರತಿಪಾದನೆಯೊಂದಿಗೆ ಸಮಾಜ ಸೇವೆಗಳು ನಡೆಯುವ ಅಗತ್ಯ ಇದೆ. ದೇವರ ಸೇವೆಯೊಂದಿಗೆ ಮಾನವೀಯತೆ ಮೌಲ್ಯಗಳಿಗೆ ಹೆಚ್ಚಿನ ರೀತಿಯಲ್ಲಿ ಒತ್ತು ನೀಡಬೇಕಾಗಿದೆ. ಇವೆಲ್ಲದಕ್ಕೂ ಸಮಾನತೆಯ ಮನಸ್ಸುಗಳು ಬೇಕಾಗಿದೆ. ಕಾಯಿಲೆಗಳು, ಪ್ರಾಕೃತಿಕ ವಿಕೋಪಗಳು ಸೀಮಿತ ಸಮುದಾಯದವರಿಗೆ ಭಾದಿಸುವುದಿಲ್ಲ. ಅದೇ ನಿಟ್ಟಿನಲ್ಲಿ ವಿಶ್ವ ಹಿಂದು ಪರಿಷದ್ ಹಾಗೂ ಬಜರಂಗದಳವು ಜಾತಿ-ಧರ್ಮ-ಬಾಷೆ-ವರ್ಣ ಇವೆಲ್ಲವನ್ನು ಮೀರಿ ಮಾನವೀಯ ಮೌಲ್ಯವನ್ನು ಎತ್ತಿ ಹಿಡಿದು ಉಚಿತವಾಗಿ ಆರೋಗ್ಯ ಕಾರ್ಡ್ ವಿತರಿಸುತ್ತಿರುವುದು ಸಮಾಜಕ್ಕೆ ಅದರ್ಶವಾಗಿದೆ ಎಂದರು.

ವಿಶ್ವಹಿಂದೂ ಪರಿಷದ್ ಕಾರ್ಕಳ ಪ್ರಖಂಡ ಭಾಸ್ಕರ್ ಎಸ್.ಕೋಟ್ಯಾನ್ ಆರೋಗ್ಯ ಕಾರ್ಡ್ ವಿತರಣೆ ನಡೆಸಿ ಮಾತನಾಡಿ ಅನ್ಯಾಯದ ವಿರುದ್ಧ ಸಿಡಿದೆದ್ದಾಗ ಮಾತ್ರ ಸಮಾಜದಲ್ಲಿ ಹಲವು ಬದಲಾವಣೆಯಾಗಲು ಸಾಧ್ಯವಿದೆ. ಹಿಂದೂ ಪರಿಷದ್ ಹಾಗೂ ಬಜರಂಗ ದಳವು ಅಧರ್ಮದ ವಿರುದ್ಧ ಹೋರಾಡುತ್ತಾ ಸ್ವಾರ್ಥ ರಹಿತ ಸಮಾಜ ಸೇವಾ ಕೈಂಕರ್ಯಗಳನ್ನು ನಡೆಸುತ್ತಾ ಬಂದಿದೆ. ದೇಶ, ಧರ್ಮಕ್ಕೆ ದಕ್ಕೆ ಬಂದಾಗ ಅದರ ವಿರುದ್ಧ ಯುವ ಸಮುದಾಯ ಹೋರಾಡುತ್ತದೆ ಮುಂದೆಯೂ ಹೋರಾಡಲಿದೆ. ಹಾಗೆಂಬ ಕಾರಣಕ್ಕಾಗಿ ಇನ್ನೊಂದು ಧರ್ಮದ ವಿರುದ್ಧ ತಾನಾಗಿಯೇ ಸವಾರಿ ಎಂದಿಗೂ ಮಾಡಿಲ್ಲ. ಯಾವುದೋ ಸಣ್ಣ ಪುಟ್ಟ ವಿಚಾರವನ್ನೇ ಮುಂದಿಟ್ಟು ಆ ಸಂಘಟನೆಗಳ ವಿರುದ್ಧ ಕಪ್ಪು ಮಸಿ ಹಚ್ಚುವುದು ತರವಲ್ಲ ಎಂದರು.

ಕೆಎಂಸಿ ಆಸ್ಪತ್ರೆಯ ವೈದ್ಯ ಡಾ. ಆನಂದ ವೇಣುಗೋಪಾಲ್,ಕೆಎಂಸಿ ಆಸ್ಪತ್ರೆಯ ಸಾರ್ವಜನಿಕ ಸಂಪರ್ಕ ವೇದಿಕೆಯ ಮುಖ್ಯಸ್ಥ ರಾಕೇಶ್, ಬಜರಂಗದಳ ರಾಜ್ಯ ಸಂಚಾಲಕ ಸುನೀಲ್ ಕೆ.ಆರ್, ವಿಶ್ವ ಹಿಂದು ಪರಿಷದ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರತ್ನಾಕರ ಅಮೀನ್, ಬಜರಂಗದಳ ತಾಲೂಕು ಸಂಚಾಲಕ ಮಹೇಶ್ ಬೈಲೂರು, ಉದ್ಯಮಿ ಅಶೋಕ್ ಪಾಲಡ್ಕ ಈದು, ವಸಂತ ಭಟ್, ಜಯವರ್ಮ ಜೈನ್ ಮಾರ್ಪಾಲ್, ಉದಯ ಹೆಗ್ಡೆ, ಚೇತನ್ ಪೇರಲ್ಕೆ, ಪ್ರವೀಣ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.