News

ಫೆ.19 ರಂದು ಬಿಜೆಪಿ ಕಾರ್ಯಕರ್ತ ದೀಪಕ್ ರಾವ್‍ ಮನೆಗೆ ಭೇಟಿ ನೀಡಲಿದ್ದಾರೆ ಅಮಿತ್ ಶಾ

ಮಂಗಳೂರು, ಫೆ 9: ಜ.3 ರಂದು ಕೋಮು ದ್ವೇಷಕ್ಕೆ ಕೊಲೆಯಾದ ಬಿಜೆಪಿ ಕಾರ್ಯಕರ್ತ ದೀಪಕ್ ರಾವ್‍ ಮನೆಗೆ ಫೆ. 19 ರಂದು ರಾಷ್ಟ್ರೀಯ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಭೇಟಿ ನೀಡಿ ಹೆತ್ತವರಿಗೆ ಸಾಂತ್ವನ ಹೇಳಲಿದ್ದಾರೆ. 

ಬಿಜೆಪಿಯ ಚಾಣಕ್ಯ ಎಂದೇ ಗುರುತಿಸಲಾಗುವ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ರಾಜ್ಯದ ಕರಾವಳಿಯಲ್ಲಿ ಮತ್ತೆ ಕಮಲ ಅರಳಿಸಲು ರಣತಂತ್ರ ರೂಪಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ಅಮಿತ್ ಶಾ ಫೆ. 18 ರಿಂದ 20ರವರೆಗೆ ದಕ್ಷಿಣ ಕನ್ನಡ, ಉಡುಪಿ ಹಾಗು ಉತ್ತರ ಕನ್ನಡ ಜಿಲ್ಲೆಗಳಿಗೆ ಭೇಟಿ ನೀಡಲಿದ್ದಾರೆ. ಪಕ್ಷದ ಮುಖಂಡರೊಂದಿಗೆ ಸರಣಿ ಸಭೆಗಳನ್ನು ನಡೆಸಲಿರುವ ಅಮಿತ್ ಶಾ ಫೆ.19 ರಂದು ಕೋಮು ದ್ವೇಷಕ್ಕೆ ಕೊಲೆಯಾದ ಬಿಜೆಪಿ ಕಾರ್ಯಕರ್ತ ದೀಪಕ್ ರಾವ್‍ ಮನೆಗೂ ಭೇಟಿ ನೀಡಲಿದ್ದಾರೆ ಎಂದು ತಿಳಿದುಬಂದಿದೆ.

ಫೆ. 18 ರಂದು ರಾತ್ರಿ 8.30ಕ್ಕೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಲಿರುವ ಅಮಿತ್ ಶಾ ಮಂಗಳೂರಿನಿಂದ ನೇರವಾಗಿ ಕುಕ್ಕೆ ಸುಬ್ರಹ್ಮಣ್ಯಕ್ಕೆ ತೆರಳಿ ಅಲ್ಲೇ ವಾಸ್ತವ್ಯ ಹೂಡಲಿದ್ದಾರೆ.

ಫೆ. 19 ರಂದು ಬೆಳಗ್ಗೆ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ನಂತರ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ನಂತರ ಪುತ್ತೂರು ವಿವೇಕಾನಂದ ಕಾಲೇಜಿಗೆ ಭೇಟಿ ನೀಡಲಿರುವ ಅಮಿತ್ ಶಾ ಅಲ್ಲಿ ವಿದ್ಯಾರ್ಥಿಗಳ ಜತೆ ಸಂವಾದ ನಡೆಸಲಿದ್ದಾರೆ. ಮಧ್ಯಾಹ್ನ 12.30ಕ್ಕೆ ಬಂಟ್ವಾಳಕ್ಕೆ ತೆರಳಿ ಅಲ್ಲಿ ಬಿಜೆಪಿ ನವಶಕ್ತಿ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಅಲ್ಲಿಂದ ಮಂಗಳೂರು ಹೊರವಲಯದ ಸುರತ್ಕಲ್‌ನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಲಿದ್ದಾರೆ. ಅಲ್ಲಿಂದ ಉಡುಪಿಗೆ ತೆರಳಿ ಸಾಯಂಕಾಲ ಮಲ್ಪೆಯಲ್ಲಿ ಬಿಜೆಪಿ ಮೀನುಗಾರರ ಸಮಾವೇಶದಲ್ಲಿ ಪಾಲ್ಗೊಳ್ಳಲಿರುವ ಅಮಿತ್ ಷಾ, ಅಂದೇ ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಲಿದ್ದಾರೆ. ಅಲ್ಲಿ ದೇವರ ದರ್ಶನ ಪಡೆದು, ಪರ್ಯಾಯ ಪಲಿಮಾರು ಶ್ರೀ ವಿದ್ಯಾಧೀಶ ಸ್ವಾಮೀಜಿಯವರೊಂದಿಗೆ ಮಾತುಕತೆ ನಡೆಸಲಿದ್ದಾರೆ. ಇದೇ ವೇಳೆ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಲಿದ್ದಾರೆ.

ಫೆ. 20 ರಂದು ಬೆಳಗ್ಗೆ 10 ಗಂಟೆಗೆ ಉಡುಪಿಯಲ್ಲಿ ಕಾರ್ಯಕರ್ತರ ಸಭೆ ನಡೆಸಲಿರುವ ಅಮಿತ್ ಶಾ, ಮಧ್ಯಾಹ್ನ ಹೆಲಿಕಾಪ್ಟರ್ ಮೂಲಕ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರಕ್ಕೆ ತೆರಳಲಿದ್ದಾರೆ. ಅಲ್ಲಿ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡು, 2 ಗಂಟೆಗೆ ಕುಮಟಾ, 4.30ಕ್ಕೆ ಶಿರಸಿ, ಬಳಿಕ ಹುಬ್ಬಳ್ಳಿಗೆ ಪ್ರಯಾಣ ಮಾಡಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.