News

ಬೆಳಪುವಿನಲ್ಲಿ ಸಿಂಗಾಪುರ ಮಾದರಿಯ ಬಸ್ಸು ತಂಗುದಾಣ

ಉಡುಪಿ, ಫೆ 08 : ಉಡುಪಿ ತಾಲೂಕಿನ ಬೆಳಪು ಗ್ರಾಮ, ಗ್ರಾಮೀಣಾಭಿವೃದ್ಧಿಯಲ್ಲಿ ವಿಶೇಷ ಸಾಧನೆಯೊಂದಿಗೆ ರಾಜ್ಯ ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡಿದೆ. ಬೆಳಪು ಗ್ರಾಮವನ್ನು ಸ್ಮಾರ್ಟ್ ಗ್ರಾಮ ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗುತ್ತಿದ್ದು, ಇದೀಗ ಸಿಂಗಾಪುರ ಮಾದರಿಯಲ್ಲಿ ಆಕರ್ಷಣೀಯವಾದ ಸರ್ಕಲ್‌ಗಳನ್ನು ಮತ್ತು ಬಸ್ಸು ತಂಗುದಾಣವನ್ನು ನಿರ್ಮಿಸಲಾಗುತ್ತಿದೆಂದು ಬೆಳಪು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಡಾ| ದೇವಿಪ್ರಸಾದ್ ಶೆಟ್ಟಿ ತಿಳಿಸಿದ್ದಾರೆ. ಕಾಂಕ್ರೀಟೀಕರಣ ರಸ್ತೆಗಳು, ಸಂಪರ್ಕ ಸೇತುವೆಗಳು, ಶುದ್ಧ ಕುಡಿಯುವ ನೀರು, ಅಂತರ್ಜಲ ಅಭಿವೃದ್ಧಿ ಯೋಜನೆಗಳು, ಪರಿಸರ ಸಂರಕ್ಷಣೆಗೆ ಕ್ರಮ ಕೈಗೊಳ್ಳಲಾಗಿದೆ. ಗ್ರಾಮವನ್ನು ಡಿಜಿಟಲ್ ಗ್ರಾಮವನ್ನಾಗಿಸಿ ಉಚಿತ ವೈ ಫೈ, ಎ.ಟಿ.ಎಂ ವ್ಯವಸ್ಥೆಯೊಂದಿಗೆ ಅಭಿವೃದ್ಧಿಪಡಿಸಲಾಗಿದೆಂದು ಶೆಟ್ಟಿ ತಿಳಿಸಿದ್ದಾರೆ.

ಬೆಳಪುವನ್ನು ಸ್ಮಾರ್ಟ್ ಸಿಟಿ ಮಾದರಿಯಲ್ಲಿ ಸ್ಮಾರ್ಟ್ ಗ್ರಾಮವನ್ನಾಗಿ ರೂಪಿಸುವ ಕಲ್ಪನೆ ನಮ್ಮದಾಗಿದೆ. ಇದಕ್ಕೆ ಪೂರಕವಾಗಿ ಬೆಳಪುವಿಗೆ ಸಂಪರ್ಕ ಕಲ್ಪಿಸುವ ಎಲ್ಲಾ ರಸ್ತೆಗಳನ್ನು ವಿಶಾಲವಾಗಿ ಅಭಿವೃದ್ಧಿಪಡಿಸಲಾಗಿದೆ. 400 ಕೋಟಿ ವೆಚ್ಚದಲ್ಲಿ ಅತ್ಯಾಧುನಿಕ ವಿಜ್ಞಾನ ಸಂಶೋಧನಾ ಕೇಂದ್ರ ಸ್ಥಾಪನೆ, 10 ಕೋಟಿ ವೆಚ್ಚದಲ್ಲಿ ಸರಕಾರಿ ಪಾಲಿಟೆಕ್ನಿಕ್ ಕಾಲೇಜು ಸ್ಥಾಪನೆ, ಪ್ರಾಥಮಿಕ ಮತ್ತು ಆಂಗ್ಲ ಮಾಧ್ಯಮ ಪ್ರೌಢಶಾಲೆಯೊಂದಿಗೆ ಶಿಕ್ಷಣ ಗ್ರಾಮವನ್ನಾಗಿಸುವ ಗುರಿ ಹೊಂದಿದೆ. ಯುವ ಜನಾಂಗದ ಭವಿಷ್ಯಕ್ಕಾಗಿ ಉದ್ಯೋಗ ಮತ್ತು ಉದ್ದಿಮೆಗಾಗಿ 68 ಎಕ್ರೆ ಪ್ರದೇಶದಲ್ಲಿ ಸಣ್ಣ ಕೈಗಾರಿಕೆಗಳ ಪಾರ್ಕ್ ನಿರ್ಮಿಸಲಾಗುತ್ತಿದೆ. ಪಕ್ಕದಲ್ಲಿ ಕೊಂಕಣ ರೈಲು ನಿಲ್ದಾಣ ಅಭಿವೃದ್ಧಿ, ಗ್ರಾಮೀಣ ಕ್ರೀಡಾಂಗಣ, ನಗರ ಪ್ರದೇಶಕ್ಕೆ ಹೋಲುವ ಸರಕಾರಿ ವಸತಿ ಬಡಾವಣೆ, ಆರ್ಥಿಕ ಸಬಲೀಕರಣಕ್ಕೆ ಯೋಜನೆ, ಬ್ಯಾಂಕಿಂಗ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಮಾದರಿಯಾಗಿ ಪುರಾತನ ಕೆರೆಗಳನ್ನು, ಹಿಂದೂ ರುದ್ರಭೂಮಿಯನ್ನು ಅಭಿವೃದ್ಧಿಪಡಿಸಲಾಗಿದೆ. ಎಲ್ಲಾ ಸಮುದಾಯಗಳ ಅಭಿವೃದ್ಧಿ ಯೋಜನೆಗಳಿಗೆ ಅನುದಾನ ಒದಗಿಸಲಾಗಿದೆಂದು ಶೆಟ್ಟಿ ತಿಳಿಸಿದ್ದಾರೆ.

ಇದೀಗ ಬೆಳಪುವಿನಲ್ಲಿ ದಾನಿಗಳ ಸಹಕಾರದಿಂದ ಅತ್ಯಂತ ಆಕರ್ಷಣೀಯವಾದ ನಗರ ಪ್ರದೇಶಗಳನ್ನು ಹೋಲುವ ರೀತಿಯಲ್ಲಿ ಸಿಂಗಾಪುರ ಮಾದರಿಯಲ್ಲಿ 3 ಸರ್ಕಲ್ ಗಳನ್ನು ಒಂದು ಬಸ್ಸು ತಂಗುದಾಣವನ್ನು ನಿರ್ಮಿಸುವುದರೊಂದಿಗೆ ಗ್ರಾಮದ ಮೆರುಗನ್ನು ಹೆಚ್ಚಿಸಿಕೊಂಡಿದೆಂದು ಡಾ| ದೇವಿಪ್ರಸಾದ್ ಶೆಟ್ಟಿ ತಿಳಿಸಿದ್ದಾರೆ.