News

ಕುಂದಾಪುರ: ಅಪ್ರಾಪ್ತ ಬಾಲಕಿಗೆ ದೊಡ್ಡಪ್ಪನಿಂದ ನಿರಂತರ ಲೈಂಗಿಕ ದೌರ್ಜನ್ಯ- ಅರೋಪಿ ಬಂಧನ

ಕುಂದಾಪುರ, ಫೆ 08 : ಅಪ್ರಾಪ್ತ ಬಾಲಕಿಯೋರ್ವಳಿಗೆ ಆಕೆಯ ದೊಡ್ಡಪ್ಪನೇ ಲೈಂಗಿಕವಾಗಿ ದುರ್ಬಳಕೆ ಮಾಡಿಕೊಂಡ ಘಟನೆ ಶಂಕರನಾರಾಯಣ ಠಾಣಾ ವ್ಯಾಪ್ತಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಆರೋಪಿ ನಾರಾಯಣನನ್ನು ಶಂಕರನಾರಾಯಣ ಠಾಣಾ ಪೊಲೀಸರು ಬಂಧಿಸಿದ್ದು, ತನಿಖೆಯನ್ನ ನಡೆಸುತ್ತಿದ್ದಾರೆ.

ಘಟನೆ ಹಿನ್ನೆಲೆ
ಸಂತ್ರಸ್ತ ಬಾಲಕಿ ಹಾಲಾಡಿ ಸಮೀಪದ ಗ್ರಾಮವೊಂದರಲ್ಲಿ ವಾಸವಿದ್ದು, ತಂದೆ ಮತ್ತು ತಾಯಿ ಮಗಳನ್ನು ಬಿಟ್ಟು ತೆರಳಿದ ಹಿನ್ನೆಲೆ, ತನ್ನ ಅಜ್ಜಿಯ ಮನೆಯಲ್ಲಿ ವಾಸವಿದ್ದಾಳೆ. ಅಲ್ಲೇ ಪಕ್ಕದಲ್ಲಿ ದೊಡ್ಡಪ್ಪನ ಮನೆ ಕೂಡ ಇದ್ದು, ಮನೆಯಲ್ಲಿ ಯಾರೂ ಇಲ್ಲದೆ ಇರುವ ಸಂದರ್ಭ ದೊಡ್ಡಪ್ಪ ಮನೆಗೆ ಬಂದು ಹಲವು ಬಾರಿ ಲೈಂಗಿಕವಾಗಿ ಶೋಷಣೆ ನಡೆಸಿರುವುದಾಗಿ ಬಾಲಕಿ ಪೊಲೀಸರಿಗೆ ತಿಳಿಸಿದ್ದಾಳೆ.
ಹಾಲಾಡಿ ಸಮೀಪದ ಶಾಲೆಯೊಂದರಲ್ಲಿ 10ನೇ ತರಗತಿ ಕಲಿಯುತ್ತಿರುವ ವಿದ್ಯಾರ್ಥಿನಿ, ಕೆಲದಿನಗಳಿಂದ ಶಾಲೆಯಲ್ಲಿ ಮಂಕಾಗಿ ಕುಳಿತಿರುವುದನ್ನ ಶಿಕ್ಷಕರೋರ್ವರು ಕಂಡಿದ್ದಾರೆ. ಈ ಕುರಿತು ಕೌನ್ಸೆಲಿಂಗ್ ನಡೆಸಿದ ಸಂದರ್ಭ ದೊಡ್ಡಪ್ಪನಿಂದ ನಿರಂತರ ಅತ್ಯಾಚಾರವಾಗುತ್ತಿರುವ ವಿಚಾರವನ್ನ ಶಿಕ್ಷಕಿಯ ಮುಂದೆ ವಿದ್ಯಾರ್ಥಿನಿ ಹೇಳಿದ್ದಾಳೆ. ನಂತರ ಶಾಲೆಯ ಮುಖ್ಯ ಶಿಕ್ಷಕ ಮಕ್ಕಳ ಹಿತರಕ್ಷಣಾ ಸಮಿತಿಗೆ ದೂರು ನೀಡಿದ್ದು, ಅವರು ತನಿಖೆ ನಡೆಸಿ, ಶಾಲಾ ಮುಖ್ಯಶಿಕ್ಷಕರ ಮೂಲಕ ಶಂಕರನಾರಾಯಣ ಠಾಣೆಯಲ್ಲಿ ಬುಧವಾರ ಸಂಜೆ ದೂರು ದಾಖಲಿಸಿದ್ದಾರೆ. ಸದ್ಯ ಸಂತ್ರಸ್ತ ಬಾಲಕಿಯನ್ನ ರಿಮಾಂಡ್ ಹೋಂಗೆ ಕಳುಹಿಸಲಾಗಿದೆ

ಆರೋಪಿಯಿಂದ ನಕಾರ
ಆರೋಪಿ ದೊಡ್ಡಪ್ಪ ನಾರಾಯಣ ತನ್ನ ಮೇಲಿನ ಆರೋಪವನ್ನ ಅಲ್ಲಗಳೆದಿದ್ದು, ತಾನು ಊರಿನಲ್ಲೇ ಇರುವುದಿಲ್ಲ. ಆದರೂ ನನ್ನ ಮೇಲೆ ವಿನಾಕಾರಣ ದೂರು ದಾಖಲಿಸಿದ್ದಾರೆ ಎಂದು ತನ್ನ ಮೇಲಿನ ಆರೋಪವನ್ನ ಅಲ್ಲಗಳೆದಿದ್ದಾನೆ ಎಂದು ತಿಳಿದುಬಂದಿದೆ. ಮುಂದಿನ ತನಿಖೆ ಮೂಲಕ ಇನ್ನೂ ಹೆಚ್ಚಿನ ಮಾಹಿತಿ ಹೊರಬೀಳಬೇಕಿದೆ. ಸದ್ಯ ಶಂಕರನಾರಾಯಣ ಠಾಣೆಯಲ್ಲಿ ಫೋಸ್ಕೋ ಕಾಯಿದೆಯಡಿ ಪ್ರಕರಣ ದಾಖಲಾಗಿದೆ.