News

ಮೂರ್ಜೆ: ರಸ್ತೆ ಬದಿ ನಿಂತಿದ್ದ ತಾಯಿ-ಮಗುವಿಗೆ ಕಾರು ಡಿಕ್ಕಿ- ಮಗು ಸಾವು-ಚಾಲಕ ವಶಕ್ಕೆ

 

ಬಂಟ್ವಾಳ, ಫೆ 07 : ರಸ್ತೆ ಬದಿ ನಿಂತಿದ್ದ ತಾಯಿ-ಮಗುವಿಗೆ ಕಾರೊಂದು ಢಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡ ಮಗು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ಘಟನೆ ಮಂಗಳವಾರ ರಾತ್ರಿ ಬಂಟ್ವಾಳ ತಾಲೂಕು ಪಿಲಾತಬೆಟ್ಟು ಗ್ರಾಮದ ಮೂರ್ಜೆಯಲ್ಲಿ ಸಂಭವಿಸಿದೆ. ಮಂಗಳೂರು ವಾಮಂಜೂರು ನಿವಾಸಿ ಲೋಹಿತಾಕ್ಷ ಅವರ ಪುತ್ರಿ ವೈಷ್ಣವಿ (3) ಮೃತ ಪಟ್ಟ ದುರ್ದೈವಿಯಾಗಿದ್ದಾಳೆ. ಲೋಹಿತಾಕ್ಷ ಅವರ ಪತ್ನಿ ಪ್ರಮೀಳಾ (26) ಅವರು ಗಾಯಗೊಂಡಿದ್ದಾರೆ.
ಮೂರ್ಜೆ ಸಮೀಪದ ಮಣ್ಣೂರುವಿನಲ್ಲಿ ಬುಧವಾರ ಸಂಬಂಧಿಕರ ಸೀಮಂತ ಕಾರ್ಯಕ್ರಮಕ್ಕೆ ಪ್ರಮೀಳಾ ಮತ್ತು ವೈಷ್ಣವಿ ಆಗಮಿಸಿದ್ದರು. ಮಣ್ಣೂರುಗೆ ತೆರಳಲು ರಸ್ತೆ ಬದಿ ನಿಂತಿದ್ದಾಗ ಕಾವಳಕಟ್ಟೆ ಕಡೆಯಿಂದ ಬಂದ ನ್ಯಾನೋ ಕಾರು ಅವರಿಗೆ ಢಿಕ್ಕಿ ಹೊಡೆದಿತ್ತು. ಬಳಿಕ ರಸ್ತೆ ಬದಿ ನಿಲ್ಲಿಸಿದ್ದ 5-6 ದ್ವಿಚಕ್ರ ವಾಹನಗಳಿಗೂ ಢಿಕ್ಕಿ ಹೊಡೆದಿತ್ತು. ಗಂಭೀರ ಗಾಯಗೊಂಡ ಅವರನ್ನು ಕೂಡಲೇ ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ತಡರಾತ್ರಿ ಮಗು ಮೃತ ಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕಾರು ಚಾಲಕ ಪುಂಜಾಲಕಟ್ಟೆ ನಿವಾಸಿ ಮೊದಿನ್ ಸಾಹೇಬ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮಣ್ಣೂರಿನ ಸುರೇಶ್ ಅವರು ನೀಡಿದ ದೂರಿನಂತೆ ಪುಂಜಾಲಕಟ್ಟೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.