News

ತುಂಬೆ ಡ್ಯಾಂ: ಮುಳುಗಡೆ ಜಮೀನಿನ ಸ್ಪಷ್ಟ ಚಿತ್ರಣ ನೀಡಲು ಜಿಲ್ಲಾಧಿಕಾರಿ ಸೂಚನೆ

ಬಂಟ್ವಾಳ ಫೆ 07 : ತುಂಬೆ ಡ್ಯಾಂನಲ್ಲಿ ಜ.11 ರಿಂದ ಪ್ರಾಯೋಗಿಕವಾಗಿ 6 ಮೀ. ನೀರು ಸಂಗ್ರಹಿಸಿ ಮುಳುಗಡೆ ಜಮೀನಿನ ಸ್ಪಷ್ಟ ಚಿತ್ರಣ ನೀಡಿ ಸೂಕ್ತ ಪರಿಹಾರಕ್ಕೆ ವ್ಯವಸ್ಥೆ ಮಾಡುವಂತೆ ಮನಪಾ ಆಯುಕ್ತರು, ಬಂಟ್ವಾಳ ತಹಶೀಲ್ದಾರ್, ಜಿ.ಪಂ.ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಅವರಿಗೆ ದ.ಕ.ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ಲಿಖಿತ ಸೂಚಿಸಿದ್ದಾರೆ.

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಂತ್ರಸ್ತ ರೈತರ ಸಭೆಯಲ್ಲಿ ಮನಪಾ ಆಯುಕ್ತರು ಪ್ರಸ್ತುತ ಪರಿಶೀಲನೆಯಾಗಿ ನೀರು ನಿಲುಗಡೆ ಮಾಡಿದ್ದು, ನಂತರ ಆದನ್ನೇ ಖಾಯಂ ಮಾಡಿ ರೈತರಿಗೆ ಅನ್ಯಾಯವಾಗಿರುವ ಬಗ್ಗೆ ತುಂಬೆ ಡ್ಯಾಂ ಸಂತ್ರಸ್ತ ರೈತರ ಹೋರಾಟ ಸಮಿತಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಲಿಖಿತ ಮನವಿ ಮಾಡಿತ್ತು.
ರೈತರಿಗೆ ಹೈಕೋರ್ಟ್ ಆದೇಶದಂತೆ ರೈತರ ಸಮಕ್ಷಮ ಸರ್ವೆ ಮಾಡಿ ಲಿಖಿತ ಮಾಹಿತಿ ನೀಡಿ ತಾರತಮ್ಯ ರಹಿತ ಏಕಗಂಟಿನ ನ್ಯಾಯೋಜಿತ ಸೂಕ್ತ ಪರಿಹಾರ ವಿತರಿಸುವ ಅಧಿಕಾರಿಗಳ, ಜನಪ್ರತಿನಿಧಿಗಳ ರೈತರ ಸಭೆ ಜರಗಿಸುವಂತೆ ರೈತರ ಹಿತಾಶಕ್ತಿ ಕಾಪಾಡುವಂತೆ ವಿನಂತಿಸಲಾಗಿತ್ತು.
ಮನವಿಗೆ ಸ್ಪಂದಿಸಿದ ದ.ಕ.ಜಿಲ್ಲಾಧಿಕಾರಿಗಳಿಗೆ ಹಾಗೂ ದ.ಕ.ಜಿ.ಪಂ.ಅಧ್ಯಕ್ಷರಿಗೆ ತುಂಬೆ ಡ್ಯಾಂ ಸಂತ್ರಸ್ತ ರೈತರ ಹೋರಾಟ ಸಮಿತಿ ಅಧ್ಯಕ್ಷ ಎಂ.ಸುಬ್ರಹ್ಮಣ್ಯ ಭಟ್, ಕಾರ್ಯದರ್ಶಿ ಎಸ್.ಕೆ.ಇದಿನಬ್ಬ , ದ.ಕ.ಜಿಲ್ಲಾ ರೈತ ಸಂಘ ಹಸಿರು ಸೇನೆ ಕಾರ್ಯದರ್ಶಿ ಎನ್.ಮನೋಹರ ಶೆಟ್ಟಿ , ತಾಲೂಕು ಕಾರ್ಯದರ್ಶಿ ಸುದೇಶ್ ಮಯ್ಯ , ತಾಲೂಕು ಅಧ್ಯಕ್ಷ ಶರತ್ ಕುಮಾರ್ ತನ್ಮೂಲಕ ಕೃತಜ್ಞತೆ ಸಲ್ಲಿಸಿದ್ದಾರೆ.