News

ಬಂಟ್ವಾಳ: ಕೇಂದ್ರದ ಯೋಜನೆಗಳಿಗೆ ತೆಂಗಿನಕಾಯಿ ಒಡೆದದ್ದು ಮಾತ್ರ ರೈ ಸಾಧನೆ - ನಳೀನ್ ಕುಮಾರ್ ಕಟೀಲು

ಬಂಟ್ವಾಳ ಜ 14 :ಉಸ್ತುವಾರಿ ಸಚಿವರ ಗೂಂಡಾ ರಾಜಕೀಯಕ್ಕೆ ತಿಲಾಂಜಲಿ ಇಟ್ಟು, ರಾಜೇಶ್ ನಾಯ್ಕ್ ರನ್ನು ಗೆಲ್ಲಿಸುವ ಮೂಲಕ ಬಂಟ್ವಾಳದಲ್ಲಿ ಶಾಂತಿಯುತ ವಾತಾವರಣ ನಿರ್ಮಾಣ ಬಿಜೆಪಿಯ ಗುರಿ ಎಂದು ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲು ಹೇಳಿದರು.ಭಾರತೀಯ ಜನತಾ ಪಾರ್ಟಿ ಬಂಟ್ವಾಳ ವಿಧಾನಸಭಾ ಕ್ಷೇತ್ರ ಸಮಿತಿಯ ನೇತೃತ್ವದಲ್ಲಿ ರಾಜೇಶ್ ನಾಯ್ಕ್ ಉಳಿಪ್ಪಾಡಿ ಇವರ ಮುಂದಾಳತ್ವದಲ್ಲಿ ಭಾನುವಾರ ಆರಂಭವಾದ 13 ದಿನಗಳ "ಬಂಟ್ವಾಳದ ಪರಿವರ್ತನೆಗೆ ಗ್ರಾಮದೆಡೆಗೆ ಬಿಜೆಪಿ ನಡಿಗೆ" ಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಿದ್ದರಾಮಯ್ಯ ಸರ್ಕಾರದ ಕೆಟ್ಟ ಆಡಳಿತಕ್ಕೆ ಜನ ಬೇಸತ್ತಿದ್ದಾರೆ, ಮುಖ್ಯಮಂತ್ರಿ ಯಾಗಿ ಪ್ರತಿಜ್ಞೆ ಸ್ವೀಕರಿಸಿದ ಕ್ಷಣದಿಂದಲೇ ಹಿಂದೂ ವಿರೋಧಿ ನೀತಿಯನ್ನು ಅನುಸರಿಸುತ್ತಿದ್ದಾರೆ, ಅಹಿಂದದ ಹೆಸರಿನಲ್ಲಿ ಹಿಂದೂ ಸಮಾಜವನ್ನು ಪಡೆಯುತ್ತಿದ್ದಾರೆ. ಟಿಪ್ಪು ಜಯಂತಿ ಆಚರಣೆ ಮೂಲಕ ಜನರ ಮನಸ್ಸುಗಳನ್ನು ಒಡೆದಿದ್ದಾರೆ, ಒಡೆದು ಆಳುವ ನೀತಿಯ ಮೂಲಕ ಸರ್ವಾಧಿಕಾರಿ ಧೋರಣೆ ತೋರುತ್ತಿದ್ದಾರೆ ಎಂದವರು ಆರೋಪಿಸಿದರು.

ರಾಜ್ಯಸರ್ಕಾರದಿಂದ ಹತ್ಯಾ ಭಾಗ್ಯ

ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ 21 ಮಂದಿ ಹಿಂದೂ ಕಾರ್ಯಕರ್ತರ ಹತ್ಯೆಯಲ್ಲದೆ ಸುಮಾರು 3000 ಕ್ಕೂ ಅಧಿಕ ಮಂದಿಯ ಹತ್ಯೆ ಆಗಿದೆ. ಇದು ರಾಜ್ಯ ಸರ್ಕಾರದ ಹತ್ಯಾಭಾಗ್ಯವೋ ಎಂದು ಟೀಕಿಸಿದರು.
ಆರೆಸ್ಸಸ್ ಅನ್ನು ಉಗ್ರ ಸಂಘಟನೆ ಎಂದು ಹೇಳುವ ಕಾಂಗ್ರೇಸ್ ದೇಶದಲ್ಲಿ ನಡೆದ ಬಹುತೇಕ ಬಾಂಬು ಸ್ಪೋಟಗಳಲ್ಲಿ ಉಗ್ರರಿಗೆ ನೆರವು ನೀಡಿದೆ. ಪಾಕ್ ದುಷ್ಕೃತ್ಯಗಳು ನಡೆದಾಗ ಕಾಂಗ್ರೇಸ್ ಮೌನವಾಗಿದ್ದು ಬೆಂಬಲಿಸಿದ್ದು, ಮೋದಿ ಅಧಿಕಾರ ವಹಿಸಿಕೊಂಡ ಬಳಿಕ ಯಾವುದೇ ಉಗ್ರಚಟುವಟಿಕೆ ದೇಶದೊಳಗೆ ನಡೆದಿಲ್ಲ ಎಂದರು.
ಮಾಜಿ ಶಾಸಕ ರುಕ್ಮಯ ಪೂಜಾರಿ ಮಾತನಾಡಿ, ಮುಂದಿನ ಚುನಾವಣೆಯಲ್ಲಿ ಬಂಟ್ವಾಳವನ್ನು ಕಾಂಗ್ರೇಸ್ ಮುಕ್ತವಾಗಿಸಬೇಕೆಂದು ಕರೆ ನೀಡಿದರು.
ಮಾಜಿಸಚಿವ ಬಿ.ನಾಗರಾಜ ಶೆಟ್ಟಿ ಮಾತನಾಡಿ, 18 ವರ್ಷ ತುಂಬಿದ ಯುವಕ ಯುವತಿಯರ ಹೆಸರನ್ನು ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸುವ ಕಾರ್ಯದಲ್ಲಿ ಪ್ರತಿಯೊಬ್ಬ ಕಾರ್ಯಕರ್ತರೂ ತೊಡಗಿಸಿಕೊಳ್ಳುವಂತೆ ಮನವಿ ಮಾಡಿದರು.

ರೈ ಕಾಡಿಗೆ

ರೈ ಅರಣ್ಯ ಸಚಿವರಾಗಿ ತಮ್ಮ ಪದವಿಗೂ ನ್ಯಾಯ ಕೊಡಲಿಲ್ಲ. ಶಾಸಕರಾಗಿಯೂ ಏನೂ ಮಾಡಲಿಲ್ಲ ಕೇಂದ್ರದ ಯೋಜನೆಗಳಿಗೆ ತೆಂಗಿನಕಾಯಿ ಒಡೆದದ್ದು ಮಾತ್ರ ರೈ ಸಾಧನೆ ಎಂದ ಅವರು, ಹೀಗಾಗಿ ಮುಂದಿನ ಚುನಾವಣೆಯಲ್ಲಿ ರೈ ಯವರನ್ನು ಕಾಡಿಗೆ ಕಳುಹಿಸಲು ಬಂಟ್ವಾಳದ ಜನತೆ ನಿಶ್ಚಯಿಸಿದ್ದಾರೆ, ಬೇರೆ ಬೇರೆ ಸಂಸ್ಥೆಗಳು ನಡೆಸಿದ ಸಮೀಕ್ಷೆಯಲ್ಲೂ ಇದು ಪ್ರಕಟವಾಗಿದೆ ಎಂದು ನಳಿನ್ ಹೇಳಿದರು.

ಮಾಜಿ ವಿಧಾನಪರಿಷತ್ ಸದಸ್ಯ ಮೋನಪ್ಪ ಭಂಡಾರಿ ಮಾತನಾಡಿ, ತಾಕತ್ತಿದ್ದರೆ ಅರೆಸ್ಸೆಸ್ ಪರಿವಾರ ಸಂಘಟನೆಗಳನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ನಿಷೇಧಿಸಲಿ ಎಂದು ಸವಾಲೆಸೆದರು.

ಬಿಜೆಪಿ ಮುಖಂಡ ಹರಿಕೃಷ್ಣ ಬಂಟ್ವಾಳ್ ಮಾತನಾಡಿ, ರಮಾನಾಥ ರೈ ಸ್ವಯಂಘೋಷಿತ ಜಾತ್ಯಾತೀತ ನಾಯಕ. ಅರ್ಜಿ ಹಾಕದೆ ಸರ್ಕಾರ ಜಮೀನು ಮಂಜೂರು ಮಾಡಿರುವುದು ರೈ ಯವರ ಪತ್ನಿ ಧನಭಾಗ್ಯ ರೈ ಗೆ ಮಾತ್ರ ಎಂದ ಅವರು, ಇದನ್ನು ನಾನು ಬಹಿರಂಗ ಗೊಳಿಸಿದ್ದೇನೆ. ಅದಕ್ಕೆ ನನ್ನ ವಿರುದ್ದ ಮಾನನಷ್ಟ ಹಾಕುತ್ತೇನೆ ಎಂದು ಬೆದರಿಸಿದರು. ಆದರೆ ಒಂದು ನೋಟಿಸ್ ಕೂಡ ನೀಡಿಲ್ಲ. . ನೋಟೀಸು ನೀಡಿದರೆ ಬಳಿಕ ಏನು ಮಾಡುತ್ತೇನೆ ನೋಡಿ ಎಂದು ವೈಯಕ್ತಿಕ ದಾಳಿ ರೈ ಸೋತರೆ ಮಾತ್ರ ಜಿಲ್ಲೆಯಲ್ಲಿ ಸಾಮರಸ್ಯ , ಹೀಗಾಗಿ ಪ್ರತಿಯೊಬ್ಬ ಬಿಜೆಪಿ ಕಾರ್ಯಕರ್ತರೂ ತೊಡಗಿಸಿಕೊಳ್ಳುವಂತೆ ಕರೆ ನೀಡಿದರು. ಕಾಂಗ್ರೇಸ್ ನಲ್ಲಿ ಕಾರ್ಯಕರ್ತರೇ ಇಲ್ಲ. ಇರುವವರು ಕುಳಿತವರು ಮಾತ್ರ. ಹಣ ನೀಡದೆ ಯಾವುದೇ ಕೆಲಸ ವನ್ನು ಅವರು ಮಾಡುವುದಿಲ್ಲ ಎಂದವರು ಹೇಳಿದರು.

ಉಳಿಪಾಡಿಗುತ್ತು ರಾಜೇಶ್ ನಾಯ್ಕ್ ಮಾತನಾಡಿ,ಕಳೆದ ಚುನಾವಣೆ ವೇಳೆ ನನಗೆ ಚುನಾವಣೆ ಹೊಸದಾಗಿತ್ತು, ಬಂಟ್ವಾಳ ಕ್ಷೇತ್ರವೂ ಹೊಸದಾಗಿತ್ತು.ಆದರೆ ಈ ಬಾರಿ ಕ್ಷೇತ್ರದ ಕಾರ್ಯಕರ್ತರು ನನ್ನ ಜೊತೆಗಿದ್ದಾರೆ. ಬಂಟ್ವಾಳದಲ್ಲಿಯೂ ಜನ ಪರಿವರ್ತನೆಯನ್ನು ಬಯಸಿದ್ದಾರೆ. ಹೀಗಾಗಿ ಬಂಟ್ವಾಳ ಕಾಂಗ್ರೇಸ್ ಮುಕ್ತವಾಗಲಿದೆ ಎಂದರು.
ವೇದಿಕೆಯಲ್ಲಿ ಪ್ರಮುಖರಾದ ಸುಲೋಚನಾ ಜಿ.ಕೆ.ಭಟ್, ಪದ್ಮನಾಭ ಕೊಟ್ಟಾರಿ, ಉಮಾನಾಥ ಕೋಟ್ಯಾನ್, ಬಿ.ದೇವದಾಸ ಶೆಟ್ಟಿ, ಪದ್ಮನಾಭ ಕೊಟ್ಟಾರಿ, ಜಿ.ಆನಂದ, ಚೆನ್ನಪ್ಪ ಕೋಟ್ಯಾನ್, ಮೋನಪ್ಪ ದೇವಸ್ಯ, ಜಿತೇಂದ್ರ ಕೊಟ್ಟಾರಿ, ಜಿ.ಪಂ.ಸದಸ್ಯರಾದ ರವೀಂದ್ರ ಕಂಬಳಿ, ಕಮಲಾಕ್ಷಿ ಪೂಜಾರಿ,ತುಂಗಪ್ಪ ಬಂಗೇರ, ಜಿ.ಆನಂದ, ಉಮಾನಾಥ ಕೋಟ್ಯಾನ್, ಬೃಜೇಶ್ ಚೌಟ, ರತ್ನಕುಮಾರ್ ಚೌಟ, ನಾಗೇಶ್, ಬಿ.ದಿನೇಶ ಭಂಡಾರಿ,ಸುಗುಣಾ ಕಿಣಿ, ತಂಗಮ್ಮ, ರಾಮದಾಸ ಬಂಟ್ವಾಳ ಮೊದಲಾದವರು ವೇದಿಕೆಯಲ್ಲಿದ್ದರು.
ಬಿಜೆಪಿ ಕ್ಷೇತ್ರ ಸಮಿತಿ ಅಧ್ಯಕ್ಷ ದೇವದಾಸ ಶೆಟ್ಟಿ ಸ್ವಾಗತಿಸಿದರು. ಡೊಂಬಯ್ಯ ಪೂಜಾರಿ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.