News

ಅಮಿತ್ ಶಾ ಶಕುನಿ, ರಾಜ್ಯದಲ್ಲಿ ಅಶಾಂತಿ ಸೃಷ್ಟಿಸುವ ಸಾರಥಿ- ಐವನ್ ಡಿಸೋಜ

ಮಂಗಳೂರು ಜ 11 : ಅಮಿತ್ ಶಾ ಒಬ್ಬ ಶಕುನಿ, ರಾಜ್ಯದಲ್ಲಿ ಅಶಾಂತಿ ಸೃಷ್ಟಿಸುವ ಸಾರಥಿ ಎಂದು ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿ’ಸೋಜ ವ್ಯಂಗ್ಯವಾಡಿದ್ದಾರೆ . ಕಾಂಗ್ರೆಸ್ ಕಚೇರಿಯಲ್ಲಿ ಜ 11 ರ ಗುರುವಾರ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು ಅಮಿತ್ ಶಾ ರಾಜ್ಯಕ್ಕೆ ಕಾಲಿಡುವುದೇ ಅಶಾಂತಿ ಸೃಷ್ಟಿ ಮಾಡಲು ಹಾಗೂ ಒಡೆದು ಆಳುವ ನೀತಿಯನ್ನು ಅನುಸರಿಸಲು ಎಂದು ಹೇಳಿದ್ದಾರೆ. ಅವರು ಬಂದಾಗಲೆಲ್ಲಾ ರಾಜ್ಯದಲ್ಲಿರುವ ಕಾನೂನು ವ್ಯವಸ್ಥೆಯನ್ನು ಹದಗೆಡಿಸುವ ಹೇಳಿಕೆಗಳನ್ನು ನೀಡುವ ಮೂಲಕ ಪ್ರಚೋದನಕಾರಿಯಾಗಿ ಮಾತನಾಡುತ್ತಾರೆ. ರಾಜ್ಯದಲ್ಲಿ ಯಾವುದೇ ಹತ್ಯೆಗಳು ಆದಾಗ ಕಾಂಗ್ರೆಸ್ ಪ್ರೇರಿತ ಕೊಲೆ, ಹಿಂದೂ ಕಾರ್ಯಕರ್ತರ ಕೊಲೆ ಎಂದು ರಾಜ್ಯದ ಜನತೆಯ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದರು. ಕೆ.ಎಪ್. ಡಿ ಬ್ಯಾನ್ ಮಾಡಿ ಎಂದು ಒತ್ತಾಯ ಮಾಡುವ ಬಿಜೆಪಿಯವರು ಕೇಂದ್ರದಲ್ಲಿ ತಮ್ಮದೇ ಸರಕಾರ ಇದೆ ಎಂದು ಮರೆತಂತಿದೆ. ಕೇಂದ್ರವೇ ಯಾಕೆ ಕೆ.ಎಪ್. ಡಿ ಸಂಘಟನೆಯನ್ನು ಬ್ಯಾನ್ ಮಾಡುವ ಬಗ್ಗೆ ಯೋಚನೆ ಮಾಡುವುದಿಲ್ಲ ಎಂದು ಪ್ರಶ್ನಿಸಿದರು.

ಕರ್ನಾಟಕ ರಾಜ್ಯದಲ್ಲಿ ಹಿಂದೂ ವಿರೋಧಿ ಸರ್ಕಾರ ಅಧಿಕಾರದಲ್ಲಿದೆ ಎಂದು ಹೇಳುವ ಅಮಿತ್ ಶಾ ಗೆ, ರಾಜ್ಯ ಸರ್ಕಾರದಲ್ಲಿ ಶೇಕಡಾ 95 ರಷ್ಟು ಹಿಂದೂ ಧರ್ಮದ ಅನುಯಾಯಿಗಳು ಇದ್ದಾರೆ ಎನ್ನುವುದನ್ನು ಮರೆತಂತಿದೆ. ಶಾ ಅವರಿಗೆ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ ಎನ್ನುವ ಭಯ ಕಾಡಲಾರಂಭಿಸಿದೆ. ಹೀಗಾಗಿ ಯುದ್ದ ಮಾಡದೇ ಬೇರೆ ಉಪಾಯ ಇಲ್ಲ ಎನ್ನುವ ಅನಿವಾರ್ಯತೆಯಿಂದ ಈ ರೀತಿ ಮಾತನಾಡುತ್ತಿದ್ದಾರೆ. ಅಲ್ಲದೆ ರಾಜ್ಯದಲ್ಲಿ ಚುಕ್ಕಾಣಿ ಹಿಡಿದಿರುವ ಅತ್ಯುತ್ತಮ ಕಾಂಗ್ರೆಸ್ ನೇತೃತ್ವದ ಸರ್ಕಾರ ಕಂಡು ವಿರೋಧ ಪಕ್ಷ ಬಿಜೆಪಿಗೂ ಕೂಡಾ ನಮ್ಮ ವಿರುದ್ದ ಒಂದೇ ಒಂದು ಭ್ರಷ್ಟಚಾರದ ಆರೋಪ ಹೊರಿಸಲು ಸಾಧ್ಯವಾಗಿಲ್ಲ ಎಂದರು. ಸುದ್ದಿಗೋಷ್ಟಿಯಲ್ಲಿ ಪಕ್ಷದ ಮುಖಂಡರಾದ ಇಬ್ರಾಹಿಂ ಕೋಡಿಜ್ಜಾಲ್, ಆರೀಫ್ ಬಾವ, ಸತೀಶ್ ಮತ್ತಿತರರು ಉಪಸ್ಥಿತರಿದ್ದರು.