News

ಕುಂಬಳೆ: ಶಂಕಾಸ್ಪದ ರೀತಿಯಲ್ಲಿ ವರ್ತನೆ- ಇಬ್ಬರು ಪೊಲೀಸರ ವಶ

ಕುಂಬಳೆ ಜ 10 : ಅನುಮಾನಸ್ಪದ ರೀತಿಯಲ್ಲಿ ವರ್ತಿಸುತ್ತಿದ್ದ ಇಬ್ಬರು ಯುವಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಜ 09 ರ ಮಂಗಳವಾರ ಸಂಜೆ ಸೀತಾಂಗೋಳಿಯಲ್ಲಿ ಘಟನೆ ನಡೆದಿದ್ದು, ಮಾದಕ ದ್ರವ್ಯದ ಅಮಲಿನಲ್ಲಿದ್ದ ಇವರು, ಘರ್ಷಣೆ ಸೃಷ್ಟಿಸುವ ಉದ್ದೇಶದಿಂದ ಸ್ಕಾರ್ಪಿಯೋ ವಾಹನದಲ್ಲಿ ಸಂಚು ಹಾಕುತ್ತಿದ್ದರು ಎನ್ನುವ ಸಂಶಯದ ಆಧಾರ ಮೇಲೆ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ. ಸೀತಾಂಗೋಳಿ ಕ್ವಾರ್ಟರ್ಸ್‌ನಲ್ಲಿ ವಾಸಿಸುವ ಫೈಜಲ್ ಯಾನೆ ಟಯರ್ ಫೈಜಲ್ (30), ಆದೂರು ಕುಕ್ಕಂಗಯ ನಿವಾಸಿ ರಫಿಕ್ ಯಾನೆ ರಫಿ(27) ವಶಕ್ಕೆ ಪಡೆದವರು. ಇವರು ಬಳಸಿದ ಸ್ಕಾರ್ಪಿಯೋ ವಾಹನವನ್ನೂ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಶಂಕಾಸ್ಪದ ರೀತಿಯಲ್ಲಿ ವರ್ತಿಸುತ್ತಿದ್ದ ಇವರನ್ನು ಪೊಲೀಸರು ಪ್ರಶ್ನಿಸಿದಾಗ ,ಅಸಭ್ಯವಾಗಿ ವರ್ತಿಸಿದ್ದಲ್ಲದೆ, ಪೊಲೀಸರ ಮೇಲೆಯೇ ದಾಳಿಗೆ ಯತ್ನಿಸಿದ್ದಾರೆ.ಬಳಿಕ ಪೊಲೀಸರು ಇವರನ್ನು ಸೆರೆಹಿಡಿದಿದ್ದು, ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸಿದ ಪ್ರಕರಣ ಸಂಬಂಧಿಸಿದಂತೆ ಕೇಸು ದಾಖಲಿಸಿದ್ದಾರೆ. ಠಾಣೆಯ ಅಡಿಶನಲ್ ಎಸ್.ಐ. ಶಿವದಾಸನ್  ಕಾರ್ಯಾಚರಣೆ ನಡೆಸಿದ್ದರು.