News

ಮಂಗಳೂರು: ದೀಪಕ್ ಹತ್ಯೆ ಪ್ರಕರಣ -ಎಚ್ ಡಿಕೆ ವಿರುದ್ದ ಒಂದು ಕೋಟಿ ರೂ ಮಾನನಷ್ಟ ಮೊಕದ್ದಮೆ ದಾಖಲು


ಮಂಗಳೂರು ಜ 09 : ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ರಾಜಕೀಯ ಪ್ರೌಢತೆ ಇಲ್ಲದೆ ದೀಪಕ್ ಹತ್ಯೆಯ ವಿಚಾರದಲ್ಲಿ ಹೇಳಿಕೆಗಳನ್ನು ನೀಡುತ್ತಿದ್ದು, ದೀಪಕ್ ಹತ್ಯೆಯಲ್ಲಿ ಪಾಲಿಕೆ ಸದಸ್ಯ ತಿಲಕ್ ರಾಜ್ ಹಾಗೂ ಸುರತ್ಕಲ್ ಬಿಜೆಪಿಯ ನಾಯಕರ ಹಸ್ತಕ್ಷೇಪ ಇದೆ ಎಂದು ಹೇಳಿದ ಎಚ್ ಡಿಕೆ ಆರೋಪವನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ ಎಂದು ಬಿಜೆಪಿ ಮಂಗಳೂರು ಉತ್ತರ ವಿಧಾನಸಭೆ ಕ್ಷೇತ್ರದ ಅಧ್ಯಕ್ಷ ಡಾ| ಭರತ್ ಶೆಟ್ಟಿ ಹೇಳಿದ್ದಾರೆ. ಈ ಬಗ್ಗೆ ನಗರದ ಬಿಜೆಪಿ ಕಚೇರಿಯಲ್ಲಿ ಜ 9 ರ ಮಂಗಳವಾರ ಸುದ್ದಿಗೋಷ್ಟಿ ನಡೆಸಿ ಮಾತನಾಡಿ ಇಂತಹ ಸುಖಾಸುಮ್ಮನೆ ಯಾವುದೇ ಆಧಾರಗಳಿಲ್ಲದ ಆರೋಪ ಮಾಡಿದ್ದು , ದಕ್ಷಿಣ ಕನ್ನಡದ ಪ್ರಧಾನ ನ್ಯಾಯಾಲಯದಲ್ಲಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕುಮಾರಸ್ವಾಮಿ ವಿರುದ್ದ ಒಂದು ಕೋಟಿ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದೇವೆ ಎಂದರು.

ಶಾಸಕ ಬಾವ ಕೂಡಾ ಹತ್ಯೆಯ ಹಿಂದೆ ಬಿಜೆಪಿ ಮುಖಂಡರ ವಿರುದ್ದ ಸಂಶಯ ವ್ಯಕ್ತಪಡಿಸಿದ್ದಾರೆ, ಒಂದು ವೇಳೆ ಅವರಲ್ಲಿ ಪೂರಕ ದಾಖಲೆಗಳಿದ್ದರೆ ಅದನ್ನು ಪೊಲೀಸರಿಗೆ ಹಸ್ತಾಂತರಿಸಲಿ, ಆದರೆ ಶವದ ಮೇಲೆ ರಾಜಕೀಯ ಮಾಡುವುದು ಸರಿಯಲ್ಲ ಎಂದು ಕಿಡಿಕಾರಿದರು. ಇನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ದೀಪಕ್ ಹಾಗೂ ಬಷೀರ್ ಮನೆಯ ಭೇಟಿ ರಾಜಕೀಯ ದುರುದ್ದೇಶದಿಂದ ಕೂಡಿದೆ ಕಾರಣ ಶರತ್ ಮಡಿವಾಳ ಹತ್ಯೆಯಾದಾಗ ಮುಖ್ಯಮಂತ್ರಿ ಜಿಲ್ಲೆಯಲ್ಲೇ ಇದ್ರೂ ಕೂಡಾ ಶರತ್ ಮಡಿವಾಳ ಅವರ ಮನೆಯವರನ್ನು ಭೇಟಿಯಾಗುವ ಮನಸ್ಸು ಮಾಡಲಿಲ್ಲ. ಬದಲಾಗಿ ಆಸ್ಪತ್ರೆಯ ಮೇಲೆ ಒತ್ತಡ ಹಾಕಿ ಸಾವಿನ ಸುದ್ದಿಯನ್ನು ಮುಚ್ಚಿಟ್ಟಿದ್ದರು ಎಂದು ಕಿಡಿಕಾರಿದರು ಉಳಿದಂತೆ ಸುದ್ದಿಗೋಷ್ಟಿಯಲ್ಲಿ ಮುಖಂಡರಾದ ವಿಕಾಸ್, ಆಶೋಕ್ ಕೃಷ್ಣಾಪುರ ಮುಂತಾದವರು ಉಪಸ್ಥಿತರಿದ್ದರು.