News

ವಿಶ್ವಾಸ ಮತಯಾಚನೆ ವೇಳೆ ನಾವು ಹಾಜರಾಗೋದಿಲ್ಲ - ಅತೃಪ್ತ ಶಾಸಕರ ಸ್ಪಷ್ಟನೆ

ಬೆಂಗಳೂರು, ಜು 17 (Daijiworld News/MSP):ಮುಖ್ಯಮಂತ್ರಿ ಎಚ್‌.ಡಿ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರಕಾರ ಗುರುವಾರ ಬೆಳಗ್ಗೆ 11 ಗಂಟೆಗೆ ವಿಶ್ವಾಸ ಮತ ಯಾಚಿಸಲಿದೆ  ಎಂದು ಈ ಹಿಂದೆ ಸ್ಪೀಕರ್ ಘೋಷಿಸಿದ್ದು, ಎಲ್ಲರ ಕುತೂಹಲ ನಾಳೆ ನಡೆಯುವ ಸದನದತ್ತ ನೆಟ್ಟಿದೆ. ಈ ನಡುವೆ  ಇಂದು ಸುಪ್ರೀಂಕೋರ್ಟ್ ಅತೃಪ್ತತರ ರಾಜೀನಾಮೆ ವಿಚಾರವಾಗಿ  ಮಧ್ಯಂತರ ಆದೇಶನೀಡಿದ್ದು ತೀರ್ಪಿನ ಬಳಿಕ  " ವಿಶ್ವಾಸಮತ ಯಾಚನೆ ಸಂದರ್ಭದಲ್ಲಿ ನಾವು ಕಲಾಪಕ್ಕೆ ಹಾಜರಾಗುವುದಿಲ್ಲ ಎನ್ನುವ ಮೂಲಕ ಅತೃಪ್ತ ಶಾಸಕರು ಸರ್ಕಾರಕ್ಕೆ ಮತ್ತೊಂದು ಸುತ್ತಿನ ಶಾಕ್ ನೀಡಿದ್ದಾರೆ.

ದೋಸ್ತಿ ಸರ್ಕಾರದ 15 ಶಾಸಕರು ರಾಜೀನಾಮೆ ಅಂಗೀಕಾರದ ಕುರಿತು ಸುಪ್ರೀಂಕೋರ್ಟ್ ಬುಧವಾರ ನೀಡಿರುವ ಮಧ್ಯಂತರ ಆದೇಶ ಬಂಡಾಯ ಶಾಸಕರಿಗೆ ಬಿಗ್ ರಿಲೀಫ್ ಕೊಟ್ಟಂತಾಗಿದೆ. ಮಾತ್ರವಲ್ಲದೆ ಅಧಿವೇಶನದಲ್ಲಿ ಪಾಲ್ಗೊಳ್ಳುವಂತೆ ಶಾಸಕರ ಮೇಲೆ ಒತ್ತಡ ಹೇರುವಂತಿಲ್ಲ ಅದು ಶಾಸಕರ ವಿವೇಚನೆಗೆ ಬಿಟ್ಟ ವಿಚಾರ ಎಂದು ತೀರ್ಪು ನೀಡಿತ್ತು. ಹೀಗಾಗಿ ಸರ್ಕಾರ ನಂಬರ್ ಗೇಮ್ ಬಹುತೇಕ ಕೊನೆಗೊಂಡತಾಗಲಿದೆ. ಅತೃಪ್ತ ಶಾಸಕರು ಗೈರು ಹಾಜರಾದರೆ ಏನೇ ಕಸರತ್ತು ನಡೆಸಿದರೂ ದೋಸ್ತಿ ಸರ್ಕಾರ ಮ್ಯಾಜಿಕ್ ನಂಬರ್ ಹೊಂದುವುದು ಕಷ್ಟ ಸಾಧ್ಯವಾಗಲಿದೆ.

224 ಸದನ ಬಲ ಹೊಂದಿರುವ ವಿಧಾನಸಭೆಯಲ್ಲಿ ಗುರುವಾರ ಅಧಿವೇಶನಕ್ಕೆ 16 ಬಂಡಾಯ ಶಾಸಕರು ಗೈರು ಹಾಜರಾದರೆ, ಸದನದ ಬಲ 208 ಆಗಲಿದೆ. ಈ ಸಾಧ್ಯತೆಯಲ್ಲಿ ಬಹುಮತ ಸಾಬೀತುಪಡಿಸಲು ಬೇಕಾಗುವ ಮಾಂತ್ರಿಕ ಸಂಖ್ಯೆ 105. ಹೀಗಾಗಿ 101 ಶಾಸಕರನ್ನು ಹೊಂದಿರುವ ದೋಸ್ತಿ ಸರ್ಕಾರ ಅಲ್ಪ ಮತಕ್ಕೆ ಕುಸಿಯಲಿದ್ದು, ಬಿಜೆಪಿಯ ಇಬ್ಬರು ಪಕ್ಷೇತರ ಶಾಸಕರ ಬೆಂಬಲದೊಂದಿಗೆ 107 ಶಾಸಕರ ಬೆಂಬಲ ಹೊಂದಿದಂತಾಗುತ್ತದೆ.