News

ಭಾರತ-ಪಾಕ್ ಗಡಿಯಲ್ಲಿ ಉಗ್ರರು ಬೃಹತ್​ ಟ್ರಕ್​ ಬಳಸಿ ದಾಳಿ ಮಾಡುವ ಸಾಧ್ಯತೆ

ನವದೆಹಲಿ, ಜೂ16(Daijiworld News/SS): ಭಾರತ-ಪಾಕಿಸ್ತಾನದ ಗಡಿಯಲ್ಲಿ ಉಗ್ರರು ಬೃಹತ್​ ಟ್ರಕ್​ ಬಳಸಿ ದಾಳಿ ಮಾಡುವ ಸಾಧ್ಯತೆ ಇದೆ ಎಂಬ ಆತಂಕದ ಮಾಹಿತಿಯನ್ನು ಪಾಕಿಸ್ತಾನ ಬಹಿರಂಗಪಡಿಸಿದೆ.

ಫೆಬ್ರವರಿ 14ರಂದು ಪುಲ್ವಾಮಾ ಬಳಿ ಉಗ್ರರು ನಡೆಸಿದ ಆತ್ಮಾಹುತಿ ದಾಳಿಯಲ್ಲಿ ಸಿಆರ್​ಪಿಎಫ್​ನ 40 ಯೋಧರು ಹುತಾತ್ಮರಾಗಿದ್ದರು. ಈ ಸ್ಥಳದಿಂದ ಕೇವಲ 7 ಕಿ.ಮೀ. ದೂರದಲ್ಲಿರುವ ಅವಂತಿಪೋರಾವನ್ನು ಉಗ್ರರು ಈ ಬಾರಿ ಗುರಿಯಾಗಿಸಿಕೊಂಡಿದ್ದಾರೆ ಎನ್ನಲಾಗಿದೆ.

ಜಮ್ಮು ಮತ್ತು ಕಾಶ್ಮೀರದ ಅವಂತಿಪೋರಾದಲ್ಲಿ ಬೃಹತ್​ ಟ್ರಕ್​ನಲ್ಲಿ ಸುಧಾರಿತ ಸ್ಫೋಟಕಗಳನ್ನು ಇರಿಸಿ ಉಗ್ರರು ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಪಾಕ್​ ಬೇಹುಗಾರಿಕೆ ಅಧಿಕಾರಿಗಳು ಭಾರತ ಮತ್ತು ಅಮೆರಿಕಕ್ಕೆ ಮಾಹಿತಿ ನೀಡಿದ್ದಾರೆ.

ಕಳೆದ ತಿಂಗಳು ತ್ರಾಲ್​ನಲ್ಲಿ ಹತನಾದ ಉಗ್ರ ಜಾಕೀರ್​ ಮೂಸಾನ ಸಾವಿಗೆ ಪ್ರತೀಕಾರ ತೀರಿಸಿಕೊಳ್ಳುವುದು ಈ ದಾಳಿಯ ಉದ್ದೇಶ ಎಂದು ಹೇಳಲಾಗಿದೆ. ಹಿಜ್ಬುಲ್​ ಮುಜಾಹಿದ್ದೀನ್​ ಉಗ್ರ ಸಂಘಟನೆಯಿಂದ 2017ರಲ್ಲಿ ಪ್ರತ್ಯೇಕಗೊಂಡಿದ್ದ ಜಾಕೀರ್​ ಮೂಸಾ ಅಲ್​ಖೈದಾದ ಸಹ ಉಗ್ರ ಸಂಘಟನೆಯಾಗಿ ಘಜ್ವಾತ್​ ಉಲ್​ ಹಿಂದ್​ ಎಂಬ ಉಗ್ರ ಸಂಘಟನೆಯನ್ನು ಸ್ಥಾಪಿಸಿ ಕಾಶ್ಮೀರ ಕಣಿವೆಯಲ್ಲಿ ಕಾರ್ಯಾಚರಿಸುತ್ತಿದ್ದ. ಭದ್ರತಾಪಡೆಗಳು ಈತನನ್ನು ಹತ್ಯೆ ಮಾಡಿದ್ದವು.