News

ಮಂಗಳೂರು: ಉಳ್ಳಾಲ ಸೇತುವೆಯಿಂದ ನಾಪತ್ತೆಯಾಗಿದ್ದ ಯುವಕನ ಶವ ಪತ್ತೆ

ಮಂಗಳೂರು, ಆ 25 (DaijiworldNews/SM): ನಗರದ ಉಳ್ಳಾಲ ಸೇತುವೆ ಬಳಿ ಬೈಕ್ ಇರಿಸಿ ನಾಪತ್ತೆಯಾಗಿದ್ದ ಕಡಬ ನೂಜಿಬಾಳ್ತಿಲ ನಿವಾಸಿ ಸದಾಶಿವ(26) ಎಂಬ ಯುವಕನ ಮೃತದೇಹ ಸಮುದ್ರದ ದಡದಿಂದ 12 ಕಿ.ಮೀ. ದೂರದಲ್ಲಿ ರವಿವಾರ ಪತ್ತೆಯಾಗಿದೆ.

ರವಿವಾರ ಕೋಸ್ಟ್‌ಗಾರ್ಡ್ ಸಿಬ್ಬಂದಿ ಸಮುದ್ರದಲ್ಲಿ ಗಸ್ತು ತಿರುಗುತ್ತಿದ್ದ ವೇಳೆ ಎನ್‌ಎಂಪಿಟಿ ಬಂದರಿನಿಂದ ಸುಮಾರು 12 ಕಿ.ಮೀ. ದೂರ ಸಮುದ್ರದಲ್ಲಿ ಶವವೊಂದು ತೇಲುತ್ತಿತ್ತು. ಕೂಡಲೇ ಪಣಂಬೂರು ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಶವವನ್ನು ಮೇಲಕ್ಕೆತ್ತಿ ಪರಿಶೀಲನೆ ನಡೆಸಿದಾಗ ನಾಪತ್ತೆಯಾದ ಯುವಕ ಸದಾಶಿವ ಎಂಬಾತನೆಂದು ತಿಳಿದುಬಂದಿದೆ.

ಮೃತದೇಹದಲ್ಲಿದ್ದ ರೈನ್‌ಕೋರ್ಟ್, ಕೈಯಲ್ಲಿ ಹಾಕಿದ್ದ ಕಡಗ ಮತ್ತು ಟ್ಯಾಟೂಗಳು ಸದಾಶಿವ ಅವರದ್ದೇ ಎಂದು ಸಂಬಂಧಿಕರು ಗುರುತು ಹಿಡಿದಿದ್ದಾರೆ. ಮೃತದೇಹವನ್ನು ವೆನ್ಲಾಕ್‌ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.